Samutkarsh

Civil Service Academy

samutkarshias@gmail.com

ಹುಬ್ಬಳ್ಳಿಯಲ್ಲಿ ಸಮುತ್ಕರ್ಷ ಕಚೇರಿ ಮತ್ತು ಅಧ್ಯಯನ ಕೇಂದ್ರ ಉದ್ಘಾಟನೆ

ಹುಬ್ಬಳ್ಳಿಯ ಬಿವಿಬಿ ಆವರಣದಲ್ಲಿರುವ ಕೆಎಲ್‌ಇ ಟೆಕ್‌ನ ಎಂಬಿಎ ಹಾಲ್‌ನಲ್ಲಿ ಗುರುವಾರ ನಾಗರಿಕ ಸೇವಾ ಪರೀಕ್ಷೆಗಳಿಗೆ ತರಬೇತಿ ನೀಡುವುದಕ್ಕಾಗಿ ಪ್ರಾರಂಭಿಸಿರುವ ಸಮುತ್ಕರ್ಷ ಕಚೇರಿ ಮತ್ತು ಅಧ್ಯಯನ ಕೇಂದ್ರವನ್ನು ಬೆಳಗಾವಿಯ ರಾಮಕೃಷ್ಣ ಆಶ್ರಮದ ಶ್ರೀ ಸತ್ವಸ್ತಾನಂದ ಸ್ವಾಮೀಜಿ ಉದ್ಘಾಟಿಸಿ ಮಾತನಾಡಿ, ಶಕ್ತಿಯೇ ಜೀವನ, ದೌರ್ಬಲ್ಯವೇ ಮರಣ ಎಂದು ಸ್ವಾಮಿ ವಿವೇಕಾನಂದರೇ ಹೇಳಿದ್ದಾರೆ ಎಂದು ತಿಳಿಸಿದರು.

ನಾಡಿನ ಇತಿಹಾಸ, ಪರಂಪರೆ ಬಗ್ಗೆ ಪ್ರತಿಯೊಬ್ಬರು ಸರಿಯಾಗಿ ತಿಳಿದುಕೊಳ್ಳುವುದು ಅವಶ್ಯ. ಅಲ್ಲದೇ ಮನುಷ್ಯನ ನಿಜ ಸ್ವರೂಪದ ಬಗ್ಗೆ ಸ್ವಲ್ಪವಾದರೂ ಅರಿತುಕೊಳ್ಳಬೇಕಾಗಿದೆ. ಅಂದಾಗ ವಯಕ್ತಿಕವಾಗಿ ಹಾಗೂ ಸಮಾಜದ ಒಳಿತಾಗಲಿದೆ. ತ್ಯಾಗ ಮತ್ತು ಸೇವೆ ಭಾರತ ಅವಳಿ ಆದರ್ಶಗಳೆಂದು ವಿವೇಕಾನಂದರು ಹೇಳಿದ್ದಾರೆ. ಎಲ್ಲಾ ಸಮಸ್ಯೆಗಳಿಗೆ ಸ್ವಾರ್ಥ ಬುದ್ದಿಯೇ ಕಾರಣವಾಘಿದೆ. ಬುದ್ದಿ ಶಕ್ತಿಯು ನಮ್ಮ ಒಳತಿಗಾಗಿ ಹಾಗೂ ಸಮಾಜದ ಒಳತಿಗಾಗಿ ಉಪಯೋಗಿಸಬೇಕು ಎಂದರು.

ಮನುಷ್ಯನಿಗೆ ಜ್ಞಾನ ಹಾಗೂ ವಿವೇಕ ಬಹಳ ಮುಖ್ಯ. ಹೇಳಿಕೊಡುವ ಜ್ಞಾನ ಉಪಯೋಗವಾಗಬೇಕಾದರೆ ವಿವೇಕ ಅವಶ್ಯವಾಗಿದೆ. ವಿವೇಕ ಇದ್ದರೆ ಮಾತ್ರ ಯಾವುದು ಸರಿ ಯಾವುದು ತಪ್ಪು ಎಂದು ಗೊತ್ತಾಗಲಿದೆ. ಇಂದಿನ ಶಿಕ್ಷಣ ವ್ಯವಸ್ಥೆ ಉತ್ತಮವಾಗಿದೆ. ತಂತ್ರಜ್ಞಾನದಲ್ಲಿಯೂ ಮುಂದೂವರೆದಿದ್ದೇವೆ. ಆದರೆ, ಅದೆಲ್ಲಾ ಸ್ವಾರ್ಥಕ್ಕಾಗಿ ಸ್ವಾರ್ಥದಲ್ಲಿಯೇ ಮುಳಗಿ ಹೋಗುತ್ತಿದೆ ಎಂದರು.

ನಿವೃತ್ತ ಐಎಎಸ್ ಅಧಿಕಾರಿ ಮದನ ಗೋಪಾಲ ಮಾತನಾಡಿ, ಸಿವಿಲ್ ಸರ್ವಿಸ್ ಕಷ್ಟ ಎಂದು ಹೇಳುತ್ತಾರೆ. ಅದು ಕಷ್ಟವಲ್ಲ. ಇದರಲ್ಲಿ 22 ವಿವಿಧ ಸೇವೆಗಳು ಒಳಗೊಂಡಿವೆ. ಸಿವಿಲ್ ಸರ್ವಿಸ್‌ಗೆ ಬರುವವರು ವಯಕ್ತಿಕ ಉದ್ದೇಶಗಳನ್ನು ಬಿಟ್ಟು, ಗ್ರಾಮೀಣ ಪ್ರದೇಶದ ಜನತೆಗೆ ಸೇವೆ ಮಾಡುವ ಮನೋಭಾವ ಹೊಂದಿರಬೇಕು. ಸೇವೆಯ ಅರ್ಥ ಮಾಡಿಕೊಳ್ಳಬೇಕು. ಅನೇಕ ರೀತಿಯ ಜನಪರ ಬದಲಾವಣೆಗಳನ್ನು ತರಬಹುದಾಗಿದೆ ಎಂದರು.

ಪ್ರಾಮಾಣಿಕತೆಯಿಂದ ಕಾನೂನು ಚೌಕಟ್ಟಿನಲ್ಲಿ ಕೆಲಸ ಮಾಡಬೇಕು. ಸಮಾಜದಲ್ಲಿ ಬದಲಾವಣೆ ತರಲು ಅನೇಕ ಅವಕಾಶಗಳು ಇವೆ. ಕಾನೂನು ಹಾಗೂ ಕಾಯ್ದೆಗಳ ಪ್ರಕಾರ ಬಡವರಿಗೆ ಅನುಕೂಲ ಮಾಡಿ ಕೊಡುವ ಕೆಲಸಕ್ಕೆ ಬದ್ಧರಾಗಬೇಕು. ಆದರೆ, ಉತ್ತರ ಕರ್ನಾಟಕ ಭಾಗದ ಅಭ್ಯರ್ಥಿಗಳಲ್ಲಿ ವಿಷಯಗಳ ಬಗ್ಗೆ ಪರಿಜ್ಞಾನ ಇದೆ. ಆದರೆ, ಮಾಹಿತಿ ಹಾಗೂ ಮಾರ್ಗದರ್ಶನ ಕೊರತೆ ಇದ್ದು, ಮಾರ್ಗದರ್ಶನ ಮಾಡುವ ಕೆಲಸವಾಗಬೇಕಾಗಿದೆ ಎಂದರು.

ನಿವೃತ್ತ ಐಪಿಎಸ್ ಅಧಿಕಾರಿ ಡಾ. ಎಂ.ಎನ್. ಕೃಷ್ಣಮೂರ್ತಿ ಮಾತನಾಡಿ, ಉತ್ತರ ಕರ್ನಾಟಕ ಭಾಗದಲ್ಲಿ ಇಂತಹ ಸಂಸ್ಥೆ ಜನ್ಮ ತಾಳಿದ್ದು ಒಳ್ಳೆಯ ಬೆಳವಣಿಗೆ. ಈ ಸಂಸ್ಥೆಯು ಗ್ರಾಮೀಣ ಭಾಗದ ಬಡ ವಿದ್ಯಾರ್ಥಿಗಳಿಗೆ ಅನುಕೂಲವಾಗುವ ರೀತಿಯಲ್ಲಿ ಕೆಲಸ ಕಾರ್ಯಗಳನ್ನು ಮಾಡಿ ಯಶಸ್ವಿಯಾಗಲಿ ಎಂದು ಹಾರೈಸಿದರು.

ಸಮುತ್ಕರ್ಷ ಟ್ರಸ್ಟ್‌ನ ಕಾರ್ಯದರ್ಶಿ ಜಿತೇಂದ್ರ ನಾಯಕ ಪ್ರಾಸ್ತಾವಿಕವಾಗಿ ಮಾತನಾಡಿ, ದೆಹಲಿಯ ಸಂಕಲ್ಪದ ಸಹಯೋಗದೊಂದಿಗೆ ಕಳೆದ ಮೂರು ವರ್ಷಗಳಿಂದ ವಿದ್ಯಾರ್ಥಿಗಳಿಗೆ ನಾಗರಿಕ ಸೇವಾ ಪರೀಕ್ಷೆಗಳ ಕುರಿತು ತರಬೇತಿ ನೀಡುತ್ತಿರುವ ಸಮುತ್ಕರ್ಷ ಟ್ರಸ್ಟ್, ತನ್ನ ಕಾರ್ಯವ್ಯಾಪ್ತಿ ಹೆಚ್ಚಿಸಿಕೊಂಡಿದೆ. 6ನೇ ತರಗತಿ ವಿದ್ಯಾರ್ಥಿಗಳಿಂದ ಸಿವಿಲ್ ಸರ್ವಿಸಸ್‌ಗೆ ಅಧ್ಯಯನ ಮಾಡುವವರಿಗೆ ಹಾಗೂ ಪೋಷಕರಿಗೂ ಮಾರ್ಗದರ್ಶನ ಮಾಡಲಾಗುತ್ತಿದೆ ಎಂದರು.

ಕೆಎಲ್‌ಇ ವಿಶ್ವವಿದ್ಯಾಲಯದ ಕುಲಪತಿ ಡಾ. ಅಶೋಕ ಶೆಟ್ಟರ್ ಮಾತನಾಡಿದರು. ಕೆಎಲ್‌ಇ ಸಂಸ್ಥೆ ನಿರ್ದೇಶಕ ಶಂಕರಣ್ಣ ಮುನವಳ್ಳಿ ಸೇರಿದಂತೆ ಸಮುತ್ಕರ್ಷ ಟ್ರಸ್ಟ್‌ನ ಸದಸ್ಯರು ಮುಂತಾದವರು ಉಪಸ್ಥಿತರಿದ್ದರು. ನೂತನ ಕಚೇರಿ ಹಾಗೂ ಕೇಂದ್ರ ವೀಕ್ಷಿಸಲಾಯಿತು. ಸಂತೋಷ್ ಸ್ವಾಗತಿಸಿದರು. ಸಮುತ್ಕರ್ಷ ಟ್ರಸ್ಟ್ ಅಧ್ಯಕ್ಷ ಡಾ. ಕ್ರಾಂತಿಕಿರಣ ವಂದಿಸಿದರು.